ಭೂಮಿ ಮಾರಾಟ ಪ್ರಕ್ರಿಯೆ ಅನರ್ಹಗೊಳಿಸಿದ್ದ ಹೈಕೋರ್ಟ್ ಆದೇಶ ರದ್ದು ಮಾಡಿದ ಸುಪ್ರೀಂ
ನವದೆಹಲಿ: ಪಿಟಿಸಿಎಲ್ ಭೂಮಿ ಪರಭಾರೆಗೆ ಸಂಬಂಧಿಸಿದಂತೆ ಭೂಮಿ ಮಾರಾಟ ಪ್ರಕ್ರಿಯೆ ಅನರ್ಹಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ.
ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ನಿರ್ದಿಷ್ಟ ಭೂಮಿಯ ವರ್ಗಾವಣೆಯ ನಿರ್ಬಂಧ-ಪಿಟಿಸಿಎಲ್) ಕಾಯ್ದೆ ಅಡಿಯ ಭೂ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಂಜಯ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಭೂಮಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲುದಾರರಾಗಿರುವ ವ್ಯಕ್ತಿಗಳು ನಂತರ ಅದರ ಮಾರಾಟ ಪ್ರಕ್ರಿಯೆಯನ್ನು ಪ್ರಶ್ನಿಸುವಂತಿಲ್ಲ. ಪಿಟಿಸಿಎಲ್ ಭೂಮಿ ಮಾರಾಟದಲ್ಲಿ ಭಾಗಿಯಾಗಿ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
1977ರಲ್ಲಿ ಈ ವಿವಾದಿತ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಬಳಿಕ 1997ರಲ್ಲಿ ಈ ಭೂಮಿಯು ಮೊದಲ ವರ್ಗಾವಣೆಯಾಗಿ 2003ರಲ್ಲಿ ಮೇಲ್ಮನವಿದಾರರಾದ ಸೀತಮ್ಮ ಎಂಬವರು ಖರೀದಿಸಿದ್ದರು. ಆದರೆ, ಈ ಮಾರಾಟ ಪ್ರಕ್ರಿಯೆ ಕಾನೂನುಬದ್ಧವಾಗಿಲ್ಲ. ಅದನ್ನು ರದ್ದುಗೊಳಿಸಬೇಕು ಎಂದು ಕೋರಿ ಮೂಲ ಮಂಜೂರುದಾರರ ಮಕ್ಕಳು 2006ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4ರ ಅನುಸಾರ ಈ ಭೂಮಿಯನ್ನು ಮಾರಾಟ ಮಾಡುವ ಮೊದಲು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಅರ್ಜಿದಾರರ ವಾದಸಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್ ಮಾರಾಟ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸೀತಮ್ಮ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು
ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ‘ಅರ್ಜಿದಾರರು ಮೂಲ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲುದಾರರಾಗಿದ್ದರು. ಆಗ ಅವರಿಗೆ 35 ಹಾಗೂ 25 ವರ್ಷ ಆಗಿತ್ತು. ಅವರಿಗೆ ಮಾರಾಟ ಪ್ರಕ್ರಿಯೆಯ ಕುರಿತು ಮಾಹಿತಿ ಇತ್ತು. ಅಲ್ಲದೆ, ಮಾರಾಟ ನಡೆದ 9 ವರ್ಷಗಳ ನಂತರ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ವಿಳಂಬವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಬೇಕಿತ್ತು’ ಎಂದು ಅಭಿಪ್ರಾ ವ್ಯಕ್ತಪಡಿಸಿ, ಮಾರಾಟ ಪ್ರಕ್ರಿಯೆಯನ್ನು ಅನರ್ಹಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
