23/04/2026

Law Guide Kannada

Online Guide

ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಜಮೀನು: ಭೂ ಮಾಫಿಯಾ ತನಿಖೆಯ ಜವಾಬ್ದಾರಿ CBI ಹೆಗಲಿಗೆ – ಹೈಕೋರ್ಟ್ ಆದೇಶ

ಬೆಂಗಳೂರು: ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಭೂಮಿ ಮಂಜೂರು ಮಾಡಿದ ಭೂ ಮಾಫಿಯಾ ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಬಿಐಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಮಹತ್ಮದ ಆದೇಶ ಹೊರಡಿಸಿದೆ. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಭೂಮಿ ಮಂಜೂರು ಮಾಡಿರುವುದು ನಿಜಕ್ಕೂ ಒಂದು ಘೋರ ವಂಚನೆ ಎಂದು ನ್ಯಾಯಪೀಠವು ಆತಂಕ ವ್ಯಕ್ತಪಡಿಸಿದೆ.

“ಅಸ್ತಿತ್ವದಲ್ಲೇ ಇಲ್ಲದ 2011ರಲ್ಲಿ ಆರಂಭಿಸಲ್ಪಟ್ಟಿರುವ ಲೇಕ್ವೀಕ್ ಟೂರಿಸಂಗೆ ಅದರ ನಿರ್ದೇಶಕರ ಜೊತೆ ಸೇರಿ ಭೂಮಿ ಸ್ವಾಧೀನಪಡಿಸಿಕೊಂಡಿರುವ ಇಡೀ ಪ್ರಕ್ರಿಯೆಯು ಸರ್ಕಾರದ ಪ್ರಾಧಿಕಾರವು ನಡೆಸಿರುವ ಕ್ರಿಮಿನಲ್ ಪಿತೂರಿಯು ಘೋರ ವಂಚನೆಯಲ್ಲದೆ ಬೇರೇನೂ ಅಲ್ಲ. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ನೈಜ ಭೂಮಾಲೀಕರಿಗೆ ಅವರ ಆಸ್ತಿಗೆ ಬಿಡಿಗಾಸು ನೀಡಿರುವ ಇದು ಶಾಸನಕ್ಕೆ ಮಾಡಿರುವ ಮಹಾವಂಚನೆಯಾಗಿದೆ’ ಎಂದು ನ್ಯಾಯಪೀಠ ಕಿಡಿಕಾರಿತು.

ಹಾಗೆಯೇ ಇಡೀ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ, ಲೇಕ್ವೀವ್ ಟೂರಿಸಂ ಕಾರ್ಪೊರೇಶನ್ ಗೆ ಬರೋಬ್ಬರಿ 10 ಲಕ್ಷ ದಂಡ ವಿಧಿಸಿ ಆದೇಶಿಸಿದ ಹೈಕೋರ್ಟ್ ನ್ಯಾಯಪೀಠವು, ನಾಲ್ಕು ವಾರಗಳಲ್ಲಿ ದಂಡ ಪಾವತಿಸುವಂತೆ ನಿರ್ದೇಶಿಸಿತು.

ಏನಿದು ಪ್ರಕರಣ
ಕರಾವಳಿ ಮೂಲದ ಪ್ರತಿಷ್ಠಿತ ಉದ್ಯಮಿಗಳಾದ ಡಾ. ರಾಮದಾಸ್ ಪೈ, ಸೈಯದ್ ಮೊಹಮ್ಮದ್ ಸಲಾಹುದ್ದೀನ್, ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಅವರನ್ನು ಪ್ರವರ್ತಕರನ್ನಾಗಿ ತೋರಿಸಿ ‘ಲೇಕ್ವೀವ್ ಟೂರಿಸಂ’ ಸಂಸ್ಥೆಯ ಅಸ್ತಿತ್ವವನ್ನು ಬಿಂಬಿಸಲಾಗಿತ್ತು. ಈ ಸಂಸ್ಥೆಯನ್ನು ಪ್ರತಿನಿಧಿಸಿ ಪಿ ಸತೀಶ್ ಪೈ 2000ದಲ್ಲಿ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ದರು. ರೆಸಾರ್ಟ್, ಪಂಚತಾರಾ ಹೋಟೆಲ್, ಅಮೂಸ್ಮೆಂಟ್ ಪಾರ್ಕ್ ಇತ್ಯಾದಿ ಮಾಡಲು ‘ಯೂನಿಕೇರ್ ಟೂರಿಸ್ಟ್ ಸೆಂಟರ್’ ಆರಂಭಿಸುವ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿಯ ಭಾಗವಾಗಿ ಅನುಕ್ರಮವಾಗಿ ಕರ್ನಾಟಕ ಸರ್ಕಾರ 2002 ಮತ್ತು 2004ರಲ್ಲಿ ಕೆಐಎಡಿಬಿಯು ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿತ್ತು.

ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ 2002-2004ರ ನಡುವೆ ಕೆಐಎಡಿಯು 55 ಎಕರೆ ಜಮೀನು ವಶಪಡಿಸಿಕೊಂಡು ಅದನ್ನು ಅಸ್ತಿತ್ವದಲ್ಲೇ ಇಲ್ಲದ ಲೇಕ್ ವೀವ್ ಟೂರಿಸಂ ಕಾರ್ಪೊರೇಶನ್ ಗೆ ನೀಡುವುದಲ್ಲದೇ ಅದನ್ನು ಟೌನ್ಶಿಪ್ ಮತ್ತು ಇತರೆ ಯೋಜನೆ ಕೈಗೊಳ್ಳಲು 2023ರಲ್ಲಿ ಅಧಿಕಾರಿಗಳು ಮತ್ತು ಸಂಸ್ಥೆಯ ನಿರ್ದೇಶಕರು ಅನುಮತಿಸಿದ್ದರು.

ಈ ಭೂ ಮಾಫಿಯಾ ವಿರುದ್ಧ ಇದೀಗ ಕರ್ನಾಟಕ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ಹೊರಡಿಸಿದೆ. ಜೊತೆಗೆ, ಇಡೀ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ, ಲೇಕ್ವೀವ್ ಟೂರಿಸಂ ಕಾರ್ಪೊರೇಶನ್ಗೆ ಬರೋಬ್ಬರಿ ₹10 ಲಕ್ಷ ದಂಡ ವಿಧಿಸಿದೆ.

ಸತೀಶ್ ಪೈ ಅವರು 2000ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಪ್ರವರ್ತಕರ ಪೈಕಿ ಯಾರೊಬ್ಬರೂ 2011ರಲ್ಲಿ ಲೇಕ್ವೀವ್ ಟೂರಿಸಂ ಆರಂಭವಾದಾಗ ಇರಲಿಲ್ಲ. ಸಂಸ್ಥೆ ಆರಂಭವಾದಾಗ ಅದರ ಷೇರು ಬಂಡವಾಳವನ್ನು ಒಂದು ಲಕ್ಷ ತೋರಿಸಲಾಗಿದ್ದು, ಶೂನ್ಯ ಆದಾಯ ತೋರಿಸಲಾಗಿದೆ, 2011ರಿಂದ 12 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾಣದ ಸಂಸ್ಥೆಗೆ 2023ರ ಮಾರ್ಚ್ 7ರಂದು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯು ಎರಡು ರಿಯಲ್ ಎಸ್ಟೇಟ್ ಡೆವಲಪರ್ಗಳ ಜೊತೆ ಲೇಕ್ವೀವ್ ಟೂರಿಸಂ ಕಾರ್ಪೊರೇಶನ್ ಪಾಲುದಾರಿಕೆ ಹೊಂದಿದೆ ಎಂಬುದನ್ನು ಪರಿಗಣಿಸಿದ್ದು ವಾಣಿಜ್ಯ ಕಚೇರಿ ಸ್ಥಳಗಳನ್ನು ಒಳಗೊಂಡು ಸಮಗ್ರ ಟೌನ್ಶಿಪ್, ಮಾಹಿತಿ ತಂತ್ರಜ್ಞಾನ ಪಾರ್ಕ್ ಇತ್ಯಾದಿಗಾಗಿ ಭೂಮಿ ಮಾರ್ಪಾಡನ್ನು ಒಪ್ಪಿತ್ತು.

ಮೊದಲಿಗೆ ಏಕಸದಸ್ಯ ಪೀಠವು ಭೂಮಾಲೀಕರ ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.