ಕಾನೂನು ವೃತ್ತಿಗೆ ಅಪರಾಧಿಗಳ ಪ್ರವೇಶ: ಸುಪ್ರೀಂಗೆ ಶಾಕಿಂಗ್ ವಿಚಾರ ತಿಳಿಸಿದ ಬಿಸಿಐ
ನವದೆಹಲಿ: ಅಪರಾಧ ಮನೋಭಾವ ಕಾನೂನು ವೃತ್ತಿಯಲ್ಲಿ ಹೆಚ್ಚುತ್ತಿದೆ. ಅಪರಾಧಿಗಳು ಕಾನೂನು ವೃತ್ತಿಗೆ ಪ್ರವೇಶಿಸುತ್ತಿದ್ದಾರೆ ಎಂದು ಅದು ತಿಳಿಸಿದೆ. ಎಂದು ಸುಪ್ರೀಂಕೋರ್ಟ್ ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶಾಕಿಂಗ್ ವಿಚಾರವನ್ನ ತಿಳಿಸಿದೆ.
ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಬಾಕಿ ಪ್ರಕರಣಗಳಿರುವ ಕಾನೂನು ಪದವೀಧರರನ್ನು ನೋಂದಾಯಿಸಲು ನಿರ್ಬಂಧ ವಿಧಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಸಮರ್ಥಿಸಿಕೊಂಡಿರುವ, ಬಾರ್ ಕೌನ್ಸಿಲ್ ಆಫ್ ಇಂಡಿಯಾ “ಅಪರಾಧಿಗಳು ಕಾನೂನು ವೃತ್ತಿಗೆ ಪ್ರವೇಶಿಸುತ್ತಿದ್ದಾರೆ” ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, “ವೃತ್ತಿಗೆ ಸೇರಿದ ನಂತರ ಅಪರಾಧಿಗಳಾಗುವವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ?” ಎಂದು ಬಿಸಿಐಯನ್ನು ಪ್ರಶ್ನಿಸಿತು.
2017ರ ಮದ್ರಾಸ್ ಹೈಕೋರ್ಟ್ ತೀರ್ಪಿನಲ್ಲಿ, ವಿಧಾನಮಂಡಲ ಸೂಕ್ತ ತಿದ್ದುಪಡಿ ಮಾಡುವವರೆಗೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ) ಬಾಕಿ ಅಪರಾಧ ಪ್ರಕರಣಗಳಿರುವ ಯಾವುದೇ ಕಾನೂನು ಪದವೀಧರರನ್ನು ರಾಜ್ಯ ಬಾರ್ ಕೌನ್ಸಿಲ್ಗಳು ನೋಂದಾಯಿಸಬಾರದು ಎಂದು ನಿರ್ದೇಶಿಸಲಾಗಿತ್ತು.ಇದನ್ನು ಪ್ರಶ್ನಿಸಿದ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹತಾ ಅವರ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, “ಎಲ್ಲಾ ಅಪರಾಧಿಗಳೂ ಈ ವೃತ್ತಿಗೆ ಬರುತ್ತಿದ್ದಾರೆ” ಎಂದು ಬಾರ್ ಕೌನ್ಸಿಲ್ ಪರ ವಕೀಲರು ಹೈಕೋರ್ಟ್ ತೀರ್ಪನ್ನು ಸಮರ್ಥಿಸಲು ಮುಂದಾದರು. ಆಗ ನ್ಯಾಯಮೂರ್ತಿ ವಿಕ್ರಂನಾಥ್, “ವೃತ್ತಿಗೆ ಸೇರಿದ ನಂತರ ಅವರು ಅಪರಾಧಿಗಳಾದರೆ ಏನು? ಅವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಮೊದಲು ಅದನ್ನು ಹೇಳಿ” ಎಂದು ಪ್ರಶ್ನಿಸಿದರು. “ಅಡೊಕೇಟ್ಸ್ ಕಾಯ್ದೆಯಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿದೆಯೇ?” ಎಂದು ನ್ಯಾಯಮೂರ್ತಿ ಸಂದೀಪ್ ಮೆಹತಾ ಕೇಳಿದರು.
ಅಂತಿಮವಾಗಿ, ಪೀಠವು ನೋಟಿಸ್ ಜಾರಿಗೊಳಿಸಿ, ಈ ಪ್ರಕರಣವನ್ನು ಬಾಕಿ ಇರುವ ಮತ್ತೊಂದು ಪ್ರಕರಣದೊಂದಿಗೆ ಜೋಡಿಸಿತು.
ಏನಿದು ಪ್ರಕರಣ
ಅರ್ಜಿದಾರರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಅವರ ಅರ್ಜಿಯನ್ನು ನೋಂದಾಯಿಸಲು ವಕೀಲರ ಪರಿಷತ್ ನಿರಾಕರಿಸಿತ್ತು. ಈ ಬಗ್ಗೆ Chairman v. S.M. Anantha Murugan (2017) ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನಿಂದ ಬಾಧಿತರಾಗಿದ್ದರು. ಈ ತೀರ್ಪಿನಲ್ಲಿ, 2015ರ ಸಿಂಗಲ್ ಬೆಂಚ್ ಆದೇಶವನ್ನು ಫುಲ್ ಬೆಂಚ್ ಮಾನ್ಯಗೊಳಿಸಿ, ಗಂಭೀರ ಅಪರಾಧ ಪ್ರಕರಣಗಳಿರುವ ಕಾನೂನು ಪದವೀಧರರನ್ನು ನೋಂದಾಯಿಸಬಾರದು ಎಂದು ಬಿಸಿಐಗೆ ಸೂಚಿಸಲಾಗಿತ್ತು.
ಮೂರು ವರ್ಷಗಳವರೆಗೆ ಶಿಕ್ಷೆ ಇರುವ ಜಾಮೀನಾತ್ಮಕ ಪ್ರಕರಣಗಳು ಹಾಗೂ ನಾಗರಿಕ ವಿವಾದಗಳನ್ನು ಹೊರತುಪಡಿಸಲಾಗಿತ್ತು.ಅರ್ಜಿದಾರರು ಕಾನೂನು ವೃತ್ತಿ ಸೇರಲು ಮತ್ತು ಹಣಕಾಸು ಕಾನೂನುಗಳ ಸೂಕ್ಷ್ಮತೆಯನ್ನು ಅರಿಯಲು 2019-20ರಲ್ಲಿ ಕಾನೂನು ಕಾಲೇಜಿಗೆ ಸೇರಿ ಪದವಿ ಪಡೆದರು. ತರುವಾಯ, ತಮಿಳುನಾಡು ಮತ್ತು ಪುದುಚೇರಿ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದಾಗ, ತಮ್ಮ ವಿರುದ್ಧ ಪ್ರಕರಣ ಬಾಕಿ ಇದೆ, ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ವಕೀಲರ ಪರಿಷತ್ತಿನ ನೋಂದಣಿ ಸಮಿತಿ ಅವರ ಅರ್ಜಿಯನ್ನು ತಿರಸ್ಕಾರ ಮಾಡಿತು.ಹೈಕೋರ್ಟ್ ನಲ್ಲಿ ನಡೆದ ಪ್ರಕರಣದ ವಿಚಾರಣೆಯಲ್ಲಿ ಅವರು ಭಾಗಿಯಾಗಿರಲಿಲ್ಲ. ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ ಸಹವಾಚಕ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಬಾಕಿಯಿರುವುದರಿಂದ ನೋಂದಣಿ ನಿರಾಕರಿಸಲಾಗಿದೆ. ಹಾಗಾಗಿ, ತಮ್ಮ ಇಚ್ಛೆಯ ವೃತ್ತಿ ಆರಿಸುವ ಮೂಲಭೂತ ಹಕ್ಕು ಮೊಟಕುಗೊಂಡಿದೆ ಎಂದು ಅವರು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
