14/07/2026

Law Guide Kannada

Online Guide

ಪತ್ನಿಗೆ ಜೀವನಾಂಶ: ಪತಿಗೆ ಬರುವ ನಿವ್ವಳ ಆದಾಯ ಮಾತ್ರ ಪರಿಗಣಿಸಬೇಕು-ಹೈಕೋರ್ಟ್ ಮಹತ್ವದ ಆದೇಶ!

ಅಲಹಬಾದ್: ದಂಪತಿ ನಡುವಿನ ಕೌಟುಂಬಿಕ ವಿವಾದಗಳು ಹಾಗೂ ವಿಚ್ಛೇದನದ ಪ್ರಕರಣಗಳಲ್ಲಿ ಜೀವನಾಂಶ ಅಥವಾ ಮಾಸಿಕ ಭತ್ಯೆ ವಿಧಿಸುವ ಬಗ್ಗೆ ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.

ಪತ್ನಿಗೆ ಜೀವನಾಂಶ ಭತ್ಯೆಯನ್ನು ನಿರ್ಧರಿಸುವಾಗ ಪತಿಯ ಒಟ್ಟು ಸಂಬಳವನ್ನಲ್ಲ, ಬದಲಿಗೆ ತೆರಿಗೆ ಕಡಿತದ ನಂತರ ಕೈಗೆ ಬರುವ ನಿವ್ವಳ ಆದಾಯವನ್ನು (Net Income) ಮಾತ್ರ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಅಚಲ್ ಸಚ್ದೇವ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಗಂಡನ ಸಂಬಳದ ಶೇಕಡಾ 25 ರಷ್ಟು ಭಾಗವನ್ನು ಹೆಂಡತಿಗೆ ನೀಡುವ ಸೂತ್ರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆಯಾದರೂ, ಇದು ಕೇವಲ ಒಂದು ಸಾಮಾನ್ಯ ಮಾರ್ಗಸೂಚಿಯಾಗಿದೆ ಹೊರತು ಯಾವುದೇ ಕಡ್ಡಾಯ ನಿಯಮವಲ್ಲ ಎಂದು ತಿಳಿಸಿದೆ.

ನ್ಯಾಯಾಲಯದ ಪ್ರಕಾರ ಪ್ರತಿಯೊಂದು ಪ್ರಕರಣದ ಹಿನ್ನೆಲೆಯೂ ವಿಭಿನ್ನವಾಗಿರುತ್ತದೆ. ಆದ್ದರಿಂದ ಪ್ರಕರಣದ ಆಧಾರದ ಮೇಲೆ ಕಡಿಮೆ ಅಥವಾ ಹೆಚ್ಚಿನ ಭತ್ಯೆಯನ್ನು ನಿಗದಿಪಡಿಸುವ ಸಂಪೂರ್ಣ ಹಕ್ಕು ನ್ಯಾಯಾಂಗಕ್ಕಿದೆ. ಅಷ್ಟೇ ಅಲ್ಲದೆ, ಭತ್ಯೆಯನ್ನು ನಿರ್ಧರಿಸುವಾಗ ಪತಿಯ ಒಟ್ಟು ಸಂಬಳವನ್ನಲ್ಲ, ಬದಲಿಗೆ ತೆರಿಗೆ ಕಡಿತದ ನಂತರ ಕೈಗೆ ಬರುವ ನಿವ್ವಳ ಆದಾಯವನ್ನು (Net Income) ಮಾತ್ರ ಪರಿಗಣಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಈ ಸಂದರ್ಭಗಳಲ್ಲಿ ಪತ್ನಿಗೆ ಜೀವನಾಂಶ ಸಿಗಲ್ಲ..
ಕೌಟುಂಬಿಕ ಕಾನೂನಿನ ಪ್ರಕಾರ, ಪತಿಯಿಂದ ಜೀವನಾಂಶವನ್ನು ಪಡೆಯಲು ಪತ್ನಿಯು ತನ್ನನ್ನು ತಾನು ಆರ್ಥಿಕವಾಗಿ ಪೋಷಿಸಿಕೊಳ್ಳಲು ಸಂಪೂರ್ಣ ಅಸಮರ್ಥಳಾಗಿರಬೇಕು, ವಿಚ್ಛೇದನದ ನಂತರ ಮಹಿಳೆಯು ಮತ್ತೊಂದು ಮದುವೆಯಾಗಿರಬಾರದು ಅಥವಾ ಆಕೆ ವ್ಯಭಿಚಾರದ ಜೀವನ ನಡೆಸುತ್ತಿರಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಹೆಂಡತಿಗೆ ಯಾವುದೇ ಭತ್ಯೆ ಜೀವನಾಂಶ ಸಿಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಹೆಂಡತಿಯ ಘನತೆಯ ಬದುಕನ್ನು ಖಚಿತಪಡಿಸುವುದೇ ಕೋರ್ಟ್ ಉದ್ದೇಶ!

ಮಹಿಳೆಯು ಸಮಾಜದಲ್ಲಿ ಗೌರವ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ಖಚಿತಪಡಿಸುವುದೇ ಈ ಮಾಸಿಕ ಭತ್ಯೆಯ ಮುಖ್ಯ ಉದ್ದೇಶ ಎಂದು ನ್ಯಾಯಾಲಯ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ಹೆಂಡತಿ ಉದ್ಯೋಗವಿಲ್ಲದೆ ಅಸಹಾಯಕಳಾಗಿದ್ದಾಳೆ ಮತ್ತು ಪತಿಗೆ ಸಂಪಾದನೆಯ ಉತ್ತಮ ಸಾಧನವಿದೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆ ಭತ್ಯೆ ಪಡೆಯಲು ಅರ್ಹಳಾಗಿದ್ದಾಳೆ.

ವಿವಾದದ ಹಿನ್ನೆಲೆ
ಈ ಇಡೀ ಪ್ರಕರಣವು ಕಾನ್ಪುರ್ ಕೌಟುಂಬಿಕ ನ್ಯಾಯಾಲಯ (Family Court) ನೀಡಿದ್ದ ತೀರ್ಪಿನಿಂದ ಆರಂಭವಾಗಿತ್ತು. ಕೌಟುಂಬಿಕ ನ್ಯಾಯಾಲಯವು ಹೆಂಡತಿಗೆ ಮಾಸಿಕ ₹12,000 ಭತ್ಯೆ ನಿಗದಿಪಡಿಸಿತ್ತು. ಇದನ್ನು ಹೆಚ್ಚಿಸುವಂತೆ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಪತಿ ತನ್ನ ಪತ್ನಿಯ ವಿರುದ್ಧದ ವಿಚ್ಛೇದನ ಅರ್ಜಿಯ ತೀರ್ಪನ್ನು ಮುಂದಿಟ್ಟುಕೊಂಡು ಭತ್ಯೆಯನ್ನು ವಿರೋಧಿಸಿದ್ದರು.

ವಿಚಾರಣೆಯ ವೇಳೆ ಪತಿಯ ಮಾಸಿಕ ವೇತನವು ₹86,674 ಆಗಿದ್ದು, ಎಲ್ಲಾ ಕಡಿತಗಳ ನಂತರ ಅವರ ಬ್ಯಾಂಕ್ ಖಾತೆಗೆ (Bank Account) ನಿವ್ವಳ ಆದಾಯವಾಗಿ ₹67,043 ಜಮೆಯಾಗುತ್ತಿರುವುದು ಪತ್ತೆಯಾಯಿತು. ಆದರೆ ವಿಚಾರಣಾ ನ್ಯಾಯಾಲಯವು ಈ ಅಧಿಕೃತ ದಾಖಲೆಗಳು ಮತ್ತು ಪುರಾವೆಗಳನ್ನು ಸರಿಯಾಗಿ ಪರಿಗಣಿಸದೆ ತಪ್ಪು ನಿರ್ಧಾರ ಕೈಗೊಂಡಿರುವುದು ಸಾಬೀತಾಯಿತು.

ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ತಪ್ಪುಗಳಿರುವುದನ್ನು ಪತ್ತೆ ಹಚ್ಚಿದ ಹೈಕೋರ್ಟ್ ಕೂಡಲೇ ಆ ಹಳೆಯ ತೀರ್ಪನ್ನು ರದ್ದುಗೊಳಿಸಿತು. ತಪ್ಪನ್ನು ತಕ್ಷಣವೇ ಸರಿಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿತು.

ಹೆಂಡತಿಯ ಮಾಸಿಕ ಭತ್ಯೆಯನ್ನು ₹20,000 ಕ್ಕೆ ಏರಿಸಿದ ನ್ಯಾಯಾಲಯ!
ಪತಿಯ ನಿವ್ವಳ ಆದಾಯದ ಸತ್ಯಾಂಶವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಪೀಠವು, ಪತ್ನಿಗೆ ಈ ಹಿಂದೆ ನೀಡಲಾಗುತ್ತಿದ್ದ ₹12,000 ಗಳ ಮಾಸಿಕ ಭತ್ಯೆಯ ಬದಲಿಗೆ ಇನ್ಮುಂದೆ ಪ್ರತಿ ತಿಂಗಳು ₹20,000 ಗಳ ಜೀವನಾಂಶವನ್ನು (Monthly Maintenance) ಕಡ್ಡಾಯವಾಗಿ ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.