23/08/2026

Law Guide Kannada

Online Guide

ಹಿರಿಯ ನಾಗರಿಕರ ರಕ್ಷಣೆ: ನ್ಯಾಯಮಂಡಳಿಗಳಿಗೆ ತೆರವು ಆದೇಶ ನೀಡುವ ಅಧಿಕಾರವಿದೆ – ಸುಪ್ರೀಂ

ನವದೆಹಲಿ: ಹಿರಿಯ ನಾಗರಿಕರ ಪೋಷಣೆ, ರಕ್ಷಣೆಯ ದೃಷ್ಠಿಯಿಂದ ಟ್ರಿಬ್ಯೂನಲ್ ಗಳು ಮನೆಯಿಂದ ಮಗ ಅಥವಾ ಇತರ ವ್ಯಕ್ತಿಗಳನ್ನು ತೆರವುಗೊಳಿಸುವ ಆದೇಶ ನೀಡುವ ಅಧಿಕಾರವನ್ನು ಹೊಂದಿವೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ತೀರ್ಪು ನೀಡಿದೆ. ಹಿರಿಯ ನಾಗರಿಕರ ಪೋಷಣೆ, ರಕ್ಷಣೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007ರ ಅಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಗಳಿಗೆ (Tribunals) ಮನೆಯಿಂದ ಮಗ ಅಥವಾ ಇತರ ವ್ಯಕ್ತಿಗಳನ್ನು ತೆರವುಗೊಳಿಸುವ ಆದೇಶ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾಯ್ದೆಯು ನ್ಯಾಯಮಂಡಳಿಗೆ ನಿರ್ದಿಷ್ಟ ಅಧಿಕಾರವನ್ನು ನೀಡಿದಾಗ, ಆ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಅಥವಾ ಅಗತ್ಯವಿರುವ ಎಲ್ಲ ವಿಧಾನಗಳನ್ನು ಬಳಸುವ ಅಧಿಕಾರವೂ ಅದರಲ್ಲಿ ಅಂತರ್ನಿಹಿತವಾಗಿರುತ್ತದೆ ಎಂದು ಪೀಠ ಹೇಳಿದೆ.”ಈ ತತ್ವದ ಆಧಾರದ ಮೇಲೆ, ಹಿರಿಯ ನಾಗರಿಕರ ಪೋಷಣೆ ಅಥವಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಕಾಯ್ದೆಯಡಿ ರಚಿಸಲಾದ ನ್ಯಾಯಮಂಡಳಿಗೆ ತೆರವು ಆದೇಶ ನೀಡುವ ಅಧಿಕಾರವಿದೆ ಎಂಬುದನ್ನು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಏನಿದು ಪ್ರಕರಣ
ಈ ಪ್ರಕರಣವು ಉತ್ತರ ಪ್ರದೇಶದ ಲಖನೌದಲ್ಲಿರುವ ಮನೆಯ ಮಾಲೀಕರು ರವಿ ಕಾಂತ್ ಗುಪ್ತ, ಪ್ರತಿವಾದಿ ಸಂಖ್ಯೆ 4 ಅವರ ಮಗನಾಗಿದ್ದು, ಪ್ರತಿವಾದಿ ಸಂಖ್ಯೆ 5 ಅವರ ಪತ್ನಿಯಾಗಿದ್ದರು. ಈ ಕಾನೂನು ಸಲಹಾ ಸೇವೆಗಳನ್ನು ಪಡೆಯುವುದು ಗುಪ್ತ ಅವರ ಸುಮಾರು 81 ವರ್ಷದ ತಾಯಿ ಮನೆಯಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿ, ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು.

ಜೂನ್ 5, 2022ರಂದು, ಗುಪ್ತ ಅವರು 2007ರ ಕಾಯ್ದೆಯಡಿ ತಮ್ಮ ಮನೆಯಿಂದ ಮಗನನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನವೆಂಬರ್ 15, 2022ರಂದು ಉಪವಿಭಾಗಾಧಿಕಾರಿ (SDM) ಅವರು ವಿಚಾರಣೆ ನಡೆಸಿ, ಆ ಆಸ್ತಿ, ಗುಪ್ತ ಅವರ ಸ್ವಯಾರ್ಜಿತ ಆಸ್ತಿ ಎಂದು ನಿರ್ಧರಿಸಿದರು. ಅವರ ಮಗನು ತನ್ನ ಅಜ್ಜಿಯಾಗಿದ್ದ ಗುಪ್ತ ಅವರ ತಾಯಿಗೆ ಮನೆಯಲ್ಲಿ ವಾಸಿಸಲು ಅವಕಾಶ ನೀಡಿರಲಿಲ್ಲ ಮತ್ತು ಕಿರುಕುಳ/ತೊಂದರೆ ಉಂಟುಮಾಡಿದ್ದಾನೆ ಎಂಬುದನ್ನು ಗಮನಿಸಿದರು. ಹೀಗಾಗಿ SDM ಅವರು ಮಗನನ್ನು ಮನೆಯಿಂದ ತೆರವುಗೊಳಿಸುವಂತೆ ಆದೇಶಿಸಿದರು.

ನಂತರ ಮಗ ಮತ್ತು ಆತನ ಪತ್ನಿ 2007ರ ಕಾಯ್ದೆಯ ವಿಧಿ 16ರ ಅಡಿಯಲ್ಲಿ ಜಿಲ್ಲಾಧಿಕಾರಿಯ ಮುಂದೆ ಈ ಆದೇಶವನ್ನು ಪ್ರಶ್ನಿಸಿದರು. ಆಗಸ್ಟ್ 9, 2023ರಂದು ಜಿಲ್ಲಾಧಿಕಾರಿ SDM ಅವರ ಆದೇಶವನ್ನು ಎತ್ತಿಹಿಡಿದು, ಮಗ ಮತ್ತು ಆತನ ಪತ್ನಿ ಮನೆಯನ್ನು ಖಾಲಿ ಮಾಡಿ ಅದರ ಸ್ವಾಧೀನವನ್ನು ಗುಪ್ತ ಅವರಿಗೆ ಹಸ್ತಾಂತರಿಸುವಂತೆ ಆದೇಶಿಸಿದರು.ಇದನ್ನು ಪ್ರಶ್ನಿಸಿ ದಂಪತಿ ಅಲಹಾಬಾದ್ ಹೈಕೋರ್ಟ್ ಗೆ ಮೊರೆಹೋದರು.

ಅಲಹಾಬಾದ್ ಹೈಕೋರ್ಟ್, 2007ರ ಕಾಯ್ದೆಯಡಿ ಅಧಿಕಾರಿಗಳಿಗೆ ವ್ಯಕ್ತಿಯನ್ನು ಮನೆಯಿಂದ ತೆರವುಗೊಳಿಸುವ ಆದೇಶ ನೀಡುವ ಅಧಿಕಾರವಿಲ್ಲ ಎಂದು ತೀರ್ಮಾನಿಸಿ, 2022 ಮತ್ತು 2023ರಲ್ಲಿ ನೀಡಲಾಗಿದ್ದ ಆದೇಶಗಳನ್ನು ರದ್ದುಗೊಳಿಸಿತು. ಗುಪ್ತ ಅವರ ಮರುಪರಿಶೀಲನಾ ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತು.

ತೆರವುಗೊಳಿಸುವ ಅಧಿಕಾರದ ಕುರಿತು ಹಿಂದಿನ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ 2007ರ ಕಾಯ್ದೆಯ ವಿಧಿ 7ರಡಿ ನ್ಯಾಯಮಂಡಳಿಗಳ ರಚನೆಗೆ ಅವಕಾಶವಿದೆ. ವಿಧಿ 8ರಡಿ ನ್ಯಾಯಮಂಡಳಿಗಳು ಸಂಕ್ಷಿಪ್ತ ವಿಧಾನದಲ್ಲಿ ವಿಚಾರಣೆ ನಡೆಸಬಹುದು ಮತ್ತು ಸಿವಿಲ್ ಕೋರ್ಟ್ ಇರುವ ಕೆಲವು ಅಧಿಕಾರಗಳನ್ನು ಹೊಂದಿರುತ್ತವೆ. ಕಾಯ್ದೆಯ ವಿಧಿ 27ರಡಿ ಸಿವಿಲ್ ಕೋರ್ಟ್ಗಳ ನ್ಯಾಯವ್ಯಾಪ್ತಿಯನ್ನು ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿತು.

ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಆದೇಶಗಳನ್ನು ರದ್ದು ಪಡಿಸಿ, ಅಧಿಕಾರಿಗಳು ನೀಡಿದ್ದ ಮಗನನ್ನು ಮನೆಯಿಂದ ತೆರವುಗೊಳಿಸುವ ಆದೇಶಗಳನ್ನು ಎತ್ತಿಹಿಡಿಯಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.