ಕಿರಿಯ ವಕೀಲರಿಗೆ ನ್ಯಾಯಾಂಗ ಬಂಧನ : ಸುಪ್ರೀಂ ನಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು
ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್ ನಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಕಿರಿಯ ವಕೀಲರೊಬ್ಬರಿಗೆ ಹೈಕೋರ್ಟ್ ನ್ಯಾಯಾಧೀಶರು 24 ಗಂಟೆಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇದೀಗ ಮಧ್ಯಪ್ರವೇಶಿಸಿದ್ದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಆಂಧ್ರ ಹೈಕೋರ್ಟ್ ನ್ಯಾಯಾಧೀಶರು ತಮ್ಮ ಕೋರ್ಟ್ ಕಲಾಪದ ವಿಚಾರಣೆಯ ವೇಳೆ ದುರ್ವರ್ತನೆ ತೋರಿದ ಆರೋಪದ ಮೇಲೆ ಕಿರಿಯ ವಕೀಲರನ್ನು 24 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ನ್ಯಾಯಾಧೀಶರ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಏನಿದು ಘಟನೆ…?
ಮೇ 4 ರಂದು ಆಂಧ್ರಪ್ರದೇಶ ಹೈಕೋರ್ಟ್ ನ ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ಅವರ ಮುಂದೆ ಲುಕ್ ಔಟ್ ಸುತ್ತೋಲೆ ಮತ್ತು ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿತತು. ವಿಚಾರಣೆಯ ವೇಳೆ, ಅರ್ಜಿದಾರರ ವಕೀಲರು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ಹಾಜರುಪಡಿಸುವಂತೆ ಕೇಳಿದ ನಂತರ ಟೇಬಲ್ ಮೇಲೆ ಫೈಲ್ ಎಸೆದ ವಕೀಲರ ಅನುಚಿತ ನಡವಳಿಕೆ ಬಗ್ಗೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.
“ಅರ್ಜಿದಾರರ ಪರ ವಕೀಲರು ಪೀಠದ ಮುಂದೆ ನಿರ್ಲಕ್ಷ್ಯದ ವರ್ತನೆ ತೋರಿದ್ದಾರೆ” ಎಂದು ನ್ಯಾಯಾಧೀಶರು ಆದೇಶದಲ್ಲಿ ದಾಖಲಿಸಿದ್ದು ವಕೀಲರನ್ನು 24 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು. ವಕೀಲರ ಸಂಘದ ಪದಾಧಿಕಾರಿಗಳು ಮಧ್ಯಪ್ರವೇಶಿಸಿದ ಬಳಿಕ ವಿವಾದಿತ ಆದೇಶವನ್ನು ಹಿಂಪಡೆಯಲಾಗಿತ್ತು.
ಆದರೆ, ಈ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೀವು ಖಂಡನೆ ವ್ಯಕ್ತಪಡಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಮಧ್ಯಪ್ರವೇಶಿಸಿ ಘಟನೆಯ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುವಂತೆ ಆಗ್ರಹಿಸಿತ್ತು. ನ್ಯಾಯಾಂಗದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಬಾರ್-ಬೆಂಚ್ ಸಂಬಂಧವನ್ನು ಸೌಹಾರ್ದಯುತವಾಗಿ ಕಾಪಾಡಿಕೊಳ್ಳಲು ಮತ್ತು ಆಡಳಿತಾತ್ಮಕ ಕ್ರಮಗಳ ಜೊತೆಗೆ ಈ ವಿಷಯದ ಬಗ್ಗೆ “ಸೂಕ್ತ ಸಾಂಸ್ಥಿಕ ಅರಿವು” ಮೂಡಿಸಲು ಬಾರ್ ಅಸೋಸಿಯೇಶನ್ ಮನವಿ ಮಾಡಿತ್ತು.
. “ಯುವ ವಕೀಲರು ಕೋರ್ಟ್ ಕಲಾಪದಲ್ಲಿ ನ್ಯಾಯಾಧೀಶರ ಮುಂದೆ ಪದೇ ಪದೇ ವಿನಂತಿ ಮಾಡಿದರೂ ಕಸ್ಟಡಿಗೆ ಕಳುಹಿಸುವ ಆದೇಶದಿಂದ ನ್ಯಾಯಾಲಯದ ಘನತೆ ಹೆಚ್ಚಾಗುವುದಿಲ್ಲ, ಬದಲಿಗೆ ಕೆಟ್ಟ ಪದ್ಧತಿಗೆ ನಾಂದಿ ಹಾಡುತ್ತದೆ” ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಬಿಸಿಐ ತಿಳಿಸಿತ್ತು.
ತಕ್ಷಣವೇ ಸಮಸ್ಯೆಯನ್ನು ಅರಿತುಕೊಳ್ಳುವಂತೆ, ಪ್ರಕರಣದ ವಿಚಾರಣೆಯ ವೀಡಿಯೊ ರೆಕಾರ್ಡಿಂಗ್ ಗೆ ತರಿಸಿ ಆಗಿನ ಸಂದರ್ಭವನ್ನು ಪರಿಶೀಲಿಸುವಂತೆ ಸಿಜೆಐಗೆ ಬಿಸಿಐ ಮನವಿ ಮಾಡಿತ್ತು. ಪರಿಶೀಲನೆ ಬಾಕಿ ಇರುವ ನ್ಯಾಯಾಂಗ ಕೆಲಸವನ್ನು ಹಿಂತೆಗೆದುಕೊಳ್ಳುವುದು, ನ್ಯಾಯಾಧೀಶರನ್ನು ಮತ್ತೊಂದು ಹೈಕೋರ್ಟ್ಗೆ ವರ್ಗಾಯಿಸುವುದು ಮತ್ತು ನ್ಯಾಯಾಲಯದಲ್ಲಿ ಸೂಕ್ತ ನ್ಯಾಯಾಂಗ ತರಬೇತಿ ಸೇರಿದಂತೆ ಆಡಳಿತಾತ್ಮಕ ಕ್ರಮಗಳನ್ನು ಪರಿಗಣಿಸಬೇಕೆಂದು ಅದು ಪತ್ರದಲ್ಲಿ ಬಿಸಿಐ ಉಲ್ಲೇಖಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
