ಗಂಡಂದಿರು ಮನೆಯ ಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು- ವಿಚ್ಚೇದನ ಕೋರಿದ ಪತಿಗೆ ಸುಪ್ರೀಂ ತರಾಟೆ
ನವದೆಹಲಿ: ಮನೆ ಕೆಲಸ ಮಾಡಲಿಲ್ಲವೆಂದು ಮದುವೆ ಮುರಿಯುವುದೇ?” ಗಂಡಂದಿರು ಮನೆಯ ಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ವಿಚ್ಚೇದನ ಕೋರಿದ ಪತಿಗೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.
ತನ್ನ ಹೆಂಡತಿ ಮನೆ ಕೆಲಸಗಳನ್ನು ಮಾಡುತ್ತಿಲ್ಲ ಎಂದು ‘ಕ್ರೂರತೆ’ ಆಧಾರವಾಗಿಟ್ಟು ಪತಿಯು ವಿಚ್ಛೇದನವನ್ನು ಕೋರಿದ್ದರು. ವಿಚಾರಣಾ ನ್ಯಾಯಾಲಯ ಪತಿಯ ಅರ್ಜಿಯನ್ನು ಪುರಸ್ಕರಿಸಿತ್ತು. ಆದರೆ ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು. ನಂತರ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಮದುವೆ ಎಂದರೆ ಒಬ್ಬರ ಮೇಲೆಯೇ ಹೊರೆ ಹಾಕುವ ಏಕಪಕ್ಷೀಯ ವ್ಯವಸ್ಥೆಯಲ್ಲ, ಅದು ಸಹಭಾಗಿತ್ವದ ಸಂಬಂಧ. ಇಂದಿನ ಕಾಲದಲ್ಲಿ ಜೀವನ ಸಂಗಾತಿಗಳು ‘ಮನೆಯ ಕೆಲಸಗಾರರು’ ಅಲ್ಲ. ಗಂಡಂದಿರು ಮನೆಯ ಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ತಾಕೀತು ಮಾಡಿತು.
ಹಾಗೆಯೇ ಕೇವಲ ಮನೆ ಕೆಲಸಗಳನ್ನು ಮಾಡದಿರುವುದನ್ನು ‘ಕ್ರೂರತೆ’ ಎಂದು ಪರಿಗಣಿಸಲಾಗುವುದಿಲ್ಲ ಎಂದ ನ್ಯಾಯಪೀಠ, ಪತಿ ಮತ್ತು ಪತ್ನಿ ಇಬ್ಬರೂ ವಿಚಾರಣೆಗೆ ನೇರವಾಗಿ ಹಾಜರಾಗುವಂತೆ ಸೂಚಿಸಿತು.
ನೀವು ಸೇವಕಿಯನ್ನು ಅಲ್ಲ, ಜೀವನ ಸಂಗಾತಿಯನ್ನು ಮದುವೆಯಾಗುತ್ತೀರಿ. ಆಧುನಿಕ ವಿವಾಹ ಸಂಬಂಧಗಳಲ್ಲಿ ನಿರೀಕ್ಷೆಗಳು ಬದಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಪ್ರಕರಣದ ವಿಚಾರಣೆಯಲ್ಲಿ, ದಂಪತಿಗಳ ನಡುವೆ ನಡೆದ ಮಧ್ಯಸ್ಥಿಕೆ ಪ್ರಯತ್ನ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಇಬ್ಬರೂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದರಿಂದ, ವೃತ್ತಿ ಹೊಣೆಗಾರಿಕೆಗಳೂ ಸಮಾನವಾಗಿವೆ ಎಂಬುದು ಗಮನಾರ್ಹವಾಗಿದೆ. ಇಬ್ಬರನ್ನೂ ನೇರವಾಗಿ ವಿಚಾರಣೆ ಮಾಡುವುದು ಸೂಕ್ತ ಎಂದು ಪರಿಗಣಿಸಿದ ನ್ಯಾಯಪೀಠ, “ಇಬ್ಬರನ್ನೂ ನೇರವಾಗಿ ಕರೆಸಿ, ಮಾತನಾಡಲು ನಾವು ಬಯಸುತ್ತೇವೆ,” ಎಂದು ಸೂಚಿಸಿದ್ದು, ಮುಂದಿನ ವಿಚಾರಣೆಯ ದಿನಾಂಕವನ್ನು ಏಪ್ರಿಲ್ 27ಕ್ಕೆ ನಿಗದಿಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
